| 
                                 
                                    ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ
                                        ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ಚಲನವಲನಗಳ
                                        ನೇರ ಪರಿಣಾಮ. ಆ ಸಂಗತಿಗಳ ಕಲಾತ್ಮಕ ಮೌಲ್ಯಕ್ಕೂ ಈ ಬಗೆಯ ಅತಿಮಹತ್ವ, ನಿರ್ಲಕ್ಷ್ಯಗಳಿಗೂ ನಿಕಟವಾದ
                                        ಸಂಬಂಧವಿರುವುದಿಲ್ಲ. ಕಲಾತ್ಮಕ ಮೌಲ್ಯ ಯಾವುದು, ಎನ್ನುವ ತಿಳಿವಳಿಕೆಯೂ ಬದಲಾಗುತ್ತಿರುತ್ತದೆ. ಈ
                                        ಮಾತು ಕರ್ನಾಟಕದ ಜನಪದ ಮಹಾಕಾವ್ಯಗಳ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜ. ಸಾಹಿತ್ಯ ವಿಮರ್ಶೆಯ ಪ್ರಧಾನಧಾರೆಯು
                                        ಎಷ್ಟೋ ಶತಮಾನಗಳ ಕಾಲ ಅವುಗಳ ಅಸ್ತಿತ್ವವನ್ನು ಗುರುತಿಸಲೂ ಇಲ್ಲ, ಅವುಗಳನ್ನೂ ಮೆಚ್ಚಿಕೊಳ್ಳಲೂ ಇಲ್ಲ.
                                        ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪ್ರಾರಂಭವಾದ ಜನಪದ ಸಾಹಿತ್ಯದ ಸಂಕಲನ ಕಾರ್ಯವು, ಭೂಮಾಲಿಕ
                                        ವರ್ಗಗಳಲ್ಲಿ ಪ್ರಚಲಿತವಾಗಿದ್ದ ಜನಪದಗೀತೆಗಳು ಮತ್ತು ಲಾವಣಿಗಳಿಗೆ ಸೀಮಿತವಾಗಿದ್ದವು. ಎಪ್ಪತ್ತರ
                                        ದಶಕದ ಮೊದಲ ವರ್ಷಗಳಲ್ಲಿ ಪ್ರಕಟವಾದ ‘ಮಲೆ ಮಾದೇಶ್ವರ
                                            ಕಾವ್ಯ’ ಮತ್ತು ‘ಮಂಟೇಸ್ವಾಮಿ
                                                ಕಾವ್ಯ’ಗಳು ಕೂಡ ಸಾಹಿತ್ಯಕ ಯಾಜಮಾನ್ಯದ ಧೋರಣೆಗಳಲ್ಲಿ
                                                    ಹೆಚ್ಚಿನ ಬದಲಾವಣೆಯನ್ನು ತರಲಿಲ್ಲ. ಮುಂದಿನ ಇಪ್ಪತ್ತು ವರ್ಷಗಳ ಕಾಲ ಅವುಗಳನ್ನು ಮಾನವಶಾಸ್ತ್ರದ
                                                    ಕುತೂಹಲವನ್ನು ತಣಿಸುವ ಸಾಮಗ್ರಿಯೆಂದು ಬಗೆಯಲಾಯಿತು. ಅವು ಜಾಣಪದ ಅಧ್ಯಯನಗಳ ವ್ಯಾಪ್ತಿಯಿಂದ ಹೊರಗೆ
                                                    ಬರಲಿಲ್ಲ. ಈ ಮೌಖಿಕ ಮಹಾಕಾವ್ಯಗಳನ್ನು ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟ ಜಾತಿ/ಸಮುದಾಯಗಳವರು ಹಾಡುತ್ತಿದ್ದರು. ಅವು ಅನುಭವಿಸಿದ ನಿರ್ಲಕ್ಷ್ಯಕ್ಕೆ
                                                        ಈ ಸಂಗತಿಯೂ ಕಾರಣ. ಫಿನ್ ಲ್ಯಾಂಡಿನ ಮೌಖಿಕ ಮಹಾಕಾವ್ಯವಾದ ‘ಕಾಲೇವಾಲಾ’ವನ್ನು ಅಧ್ಯಯನ ಮಾಡುವ ಅವಕಾಶ ಸಿಕ್ಕಿದ್ದು ಕೂಡ ಮಹತ್ವದ ಬದಲಾವಣೆಗೆ
                                                            ಕಾರಣವಾಗಿರಬಹುದು. 
                                 
                                
                                    ಆದರೆ, ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕದಲ್ಲಿ ನಡೆದ ಸಾಮಾಜಿಕ-ರಾಜಕೀಯ
                                        ಬದಲಾವಣೆಗಳು, ಅಕಡೆಮಿಕ್ ಅಧ್ಯಯನದ ಸ್ವರೂಪ ಮತ್ತು ಆಯ್ಕೆಗಳನ್ನು ಸಂಪೂರ್ಣವಾಗಿ ಪರಿವರ್ತಿಸಿವೆ.
                                        ಈಗ ಜಾನಪದ ಮಹಾಕಾವ್ಯಗಳನ್ನು ಇದುವರೆಗೆ ಮನ್ನಣೆ ಪಡೆದಿದ್ದ ಶ್ರೇಷ್ಠ ಸಾಹಿತ್ಯಕೃತಿಗಳಿಗೆ ಸರಿಸಮನಾಗಿ
                                        ಪರಿಗಣಿಸಲಾಗುತ್ತಿದೆ. ಸಂಸ್ಕೃತಿವಿಮರ್ಶೆಯ ದಿಕ್ಕಿನಲ್ಲಿ ಚಲಿಸಸುತ್ತಿರುವ ವಿಮರ್ಶಕರಿಗೂ ಇವು ಅಧ್ಯಯನದ
                                        ಅಮೂಲ್ಯ ಆಕರಗಳಾಗಿ ಕಂಡಿವೆ. ಈಗ ಸಾಹಿತ್ಯವೆಂಬ ಕಲೆಯನ್ನು ಕುರಿತ ವಿಚಾರಗಳು ಬಹಳ ವ್ಯಾಪಕವಾದ ಹಿನ್ನೆಲೆಯನ್ನು
                                        ಹೊಂದಿವೆ. ‘ಪ್ರಮಾಣ/ಶಿಷ್ಟ
                                            ಭಾಷೆ’ಯ ಚೌಕಟ್ಟುಗಳನ್ನು ಮೀರುವುದು ಕೂಡ ಗುಣವೇ ಇರಬಹುದೆಂಬ
                                                ನಿಲುವು ಈಗ ಮಾನ್ಯವಾಗಿದೆ. 
                                
                                    ಜನಪದ ಮಹಾಕಾವ್ಯಗಳು ಮೌಖಿಕವಾಗಿರುವುದರಿಂದ, ಅವುಗಳನ್ನು ಲಿಖಿತ
                                        ರೂಪದಲ್ಲಿ ಪ್ರಕಟಿಸಿದಾಗ ಕೆಲವು ಪರಿಮಿತಿಗಳು ಏರ್ಪಡುತ್ತವೆ. ಅವುಗಳ ಚಲನಶೀಲಗುಣವು ಇಲ್ಲವಾಗುತ್ತದೆ.
                                        ಅಂತೆಯೇ ಗೇಯತೆಯೂ ಕೂಡ ಊಹೆಯ ವಸ್ತುವಾಗಿಬಿಡುತ್ತದೆ. ಈ ಕಾವ್ಯಗಳ ಸಂವಹನ ಮತ್ತು ಸಂರಕ್ಷಣದ ಕೆಲಸದಲ್ಲಿ
                                        ಹಾಡುಗಾರರು-ನಿರೂಪಕರು ಮುಖ್ಯವಾದ ಪಾತ್ರ ವಹಿಸುತ್ತಾರೆ. ಅವರಿಗೆ ತಾವು ನಿರೂಪಿಸುತ್ತಿರುವ ಕಥೆಯ
                                        ಸ್ಥೂಲವಾದ ರೂಪುರೇಷೆಗಳು ತಿಳಿದಿರುತ್ತವೆ. ಹಾಗೆಯೇ ಯಾವುದೇ ಸಂದರ್ಭದಲ್ಲಿ ಬಳಸಬಹುದಾದ ಕೆಲವು ಸೂತ್ರರೂಪದ
                                        ವಿನ್ಯಾಸಗಳು(ಫಾರ್ಮುಲಾಯಿಕ್ ಪ್ಯಾಟ್ರನ್ಸ್) ಗೊತ್ತಿರುತ್ತವೆ. ಆದ್ದರಿಂದಲೇ ಅವರು ನೀಡುವ ಪ್ರತಿಯೊಂದು
                                        ಪ್ರದರ್ಶನವೂ(ಪರ್ಫಾಮನ್ಸ್) ಹೊಸ ಪಠ್ಯವೊಂದಕ್ಕೆ ಜನ್ಮ ಕೊಡುತ್ತದೆ. ಅಲ್ಲದೆ ಪ್ರತಿಯೊಬ್ಬ ಗಾಯಕನೂ
                                        ತಾನು ಹಾಡುತ್ತಿರುವ ಕಾವ್ಯದ ತನ್ನದೇ ಆದ ಆವೃತ್ತಿಯನ್ನು ಹೊಂದಿರುತ್ತಾನೆ. ಅದು ಅವನಿಗೆ ಗುರುಪರಂಪರೆಯಿಂದ
                                        ಹರಿದು ಬಂದಿರುತ್ತದೆ.ಅವರು ಅದನ್ನು ಹಾಡುವ ಧಾರ್ಮಿಕ ಮತ್ತು ಆಚರಣಾತ್ಮಕ ಸಂದರ್ಭಗಳು ಆಯಾ ಪಠ್ಯದ
                                        ಸ್ವರೂಪವನ್ನು ನಿರ್ಧರಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಬಗೆಯ ಚಲನಶೀಲತೆ ಮತ್ತು ಪ್ರತಿಯೊಂದು
                                        ಪೀಳಿಗೆಯ ಗಾಯಕರು ಹೊಸದಾಗಿ ಸೇರಿಸುವ ವಿವರಗಳು, ಆ ಕಾವ್ಯದ ಐತಿಹಾಸಿಕತೆಯನ್ನು ಕಂಡುಕೊಳ್ಳುವ ಕೆಲಸದಲ್ಲಿ
                                        ಕೊಂಚ ಅಡ್ಡಿಯಾಗುತ್ತವೆ. 
                                 
                                
                                    ಅನೇಕ ಜನಪದ ಕಾವ್ಯಗಳ ಅಸ್ತಿತ್ವವಿರುವುದು ಒಂದು ನಿರ್ದಿಷ್ಟ
                                        ಸಮುದಾಯದ ನಂಬಿಕೆಗಳು ಮತ್ತು ಇತಿಹಾಸದ ಚೌಕಟ್ಟಿನಲ್ಲಿ. ಅವು ಆ ಸಮುದಾಯದ ಸಂಸ್ಕೃತಿ, ಪುರಾಣ ಮತ್ತು
                                        ಅಲಿಖಿತ ಇತಿಹಾಸಗಳ ಬೃಹತ್ ಭಂಡಾರವಾಗಿರುತ್ತವೆ. ಆದ್ದರಿಂದ ಅವು ಅವರ ಅನುದಿನದ ಚಟುವಟಿಕೆಗಳನ್ನು
                                        ಧೋರಣೆಗಳನ್ನು ನಿರ್ಧರಿಸುವ ಮಾರ್ಗದರ್ಶಿಗಳಾಗಿರುತ್ತವೆ. ಆಗ ಅವುಗಳ ಸಾಹಿತ್ಯಕ ಮೌಲ್ಯವು ಕೊಂಚ ಬದಿಗೆ
                                        ಸರಿಯುತ್ತದೆ. ಈ ಕಾವ್ಯಗಳನ್ನು ಅಂತಹ ಚೌಕಟ್ಟಿನಿಂದ ಬೇರ್ಪಡಿಸಿ, ಇತರ ಸಾಹಿತ್ಯಕೃತಿಗಳ ಸಾಲಿನಲ್ಲಿ
                                        ಪರಿಶೀಲಿಸುವುದು ಅತ್ಯಗತ್ಯ. ಿವುಗಳನ್ನು ಹೀಗೆ ಸೆಕ್ಯುಲರ್ ಆಗಿ ಮಾರ್ಪಡಿಸುವುದರ ಪರಿಣಾಮ ಮತ್ತು
                                        ಪ್ರಯೋಜನಗಳನ್ನು ಕುರಿತು ವಿವರವಾಗಿ ಯೋಚಿಸಬೇಕಾಗಿದೆ. 
                                
                                    ‘ಮಲೆ ಮಾದೇಶ್ವರ
                                        ಕಾವ್ಯ’ ಮತ್ತು ‘ಮಂಟೇಸ್ವಾಮಿ
                                            ಕಾವ್ಯ’ಗಳು, ಕರ್ನಾಟಕದ ಮುಖ್ಯವಾದ ಜನಪದ ಮಹಾಕಾವ್ಯಗಳು.
                                                ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿ ಮಾದೇಶ್ವರನ ದೇವಾಲಯವಿದೆ. ಅಲ್ಲಿ ನಡೆಯುವ ವಾರ್ಷಿಕ
                                                ಜಾತ್ರೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ಕಾವ್ಯವನ್ನು ಹಾಡುವ ವೃತ್ತಿಗಾಯಕರ ಸಮುದಾಯವೇ ಇದೆ.
                                                ಅವರು ಹಲವು ಸನ್ನಿವೇಶಗಳಲ್ಲಿ ಇಂತಹ ಹಾಡುವಿಕೆಯಲ್ಲಿ ತೊಡಗುತ್ತಾರೆ. ಈ ಮಾತು ಮಂಟೇಸ್ವಾಮಿಯವರ ವಿಷಯದಲ್ಲೂ
                                                ನಿಜ. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಪ್ರದೇಶಗಳಲ್ಲಿ
                                                ಈ ಕಾವ್ಯಗಳು ಇಂದಿಗೂ ಅನೇಕ ಸಮುದಾಯಗಳಲ್ಲಿ ಜೀವಂತವಾಗಿವೆ. ಎರಡೂ ಕಾವ್ಯಗಳು ದಲಿತರು ಹಾಗೂ ಮೇಲುವರ್ಗದವರ
                                                ನಡುವಿನ ಮುಖಾಮುಖಿ ಮತ್ತು ಸಂಘರ್ಷಗಳನ್ನು ಚಿತ್ರಿಸುತ್ತವೆ. ಬಸವಣ್ಣ ಮತ್ತು ಮಂಟೇಸ್ವಾಮಿಯವರ ನಡುವಿನ
                                                ಮುಖಾಮುಖಿಯು ಶತಮಾನಗಳ ಚರಿತ್ರೆಯನ್ನು ಹಿಡಿಯುವ ಪ್ರಬಲವಾದ ರೂಪಕ. ಇಂತಹ ಮಹಾಕಾವ್ಯಗಳು, ಶತಮಾನಗಳಿಂದ
                                                ನಾಗರಿಕತೆಯು ರೂಪುಗೊಂಡಿರುವ ಬಗೆಯನ್ನು, ಮಹಾನ್ ಕಥನಗಳಲ್ಲಿ ದಾಖಲೆ ಮಾಡುತ್ತವೆ. ಅನೇಕ ಕಾವ್ಯಗಳು
                                                ವಿಭಿನ್ನ ಸಮುದಾಯಗಳ ಅಸ್ಮಿತೆಯ ಸಾಕ್ಷಿಗಳಾಗುತ್ತವೆ. ಹಾಲುಮತದ ಮಹಾಕಾವ್ಯ ಮತ್ತು ಮೈಲಾರಲಿಂಗನ ಕಾವ್ಯಗಳು
                                                ಅನುಕ್ರಮವಾಗಿ ಕುರುಬರು ಮತ್ತು ಗೊಲ್ಲರ ಸಮುದಾಯಗಳ ಜೀವನಕ್ರಮ ಮತ್ತು ಇತಿಹಾಸದ ಸುತ್ತ ರೂಪಿತವಾಗಿವೆ.
                                                ಕೃಷ್ಣಗೊಲ್ಲರ ಕಾವ್ಯ, ಜುಂಜಪ್ಪನ ಕಾವ್ಯ, ಎಲ್ಲಮ್ಮನ ಕಾವ್ಯ, ಕುಮಾರರಾಮನ ಕಾವ್ಯ ಮತ್ತು ಕರಾವಳಿ
                                                ಕರ್ನಾಟಕದ ಸಿರಿ ಮಹಾಕಾವ್ಯಗಳು ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳು. ತುಳು ಭಾಷೆಯಲ್ಲಿ ರಚಿತವಾಗಿರುವ
                                                ಪಾಡ್ದನಗಳನ್ನು ವಿಶೇಷವಾಗಿ ಹೆಸರಿಸಬೇಕು. ಸಿರಿ ಮಹಾಕಾವ್ಯವೂ ಒಂದು ಪಾಡ್ದನವೇ. ಈ ಕಾವ್ಯಗಳನ್ನು
                                                ಕನ್ನಡ ಸಾಹಿತ್ಯ ಪರಂಪರೆಯ ಪ್ರಧಾನ ಧಾರೆಯೊಳಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಅದರಿಂದ ಕನ್ನಡ
                                                ಸಾಹಿತ್ಯವು ಇನ್ನಷ್ಟು ಶ್ರೀಮಂತವಾಗುತ್ತದೆ. 
                                 
                             |